ಕೃತ್ಯಾ
 ಮಾಟ, ಮಾಟದ ಬೊಂಬೆ, ಮಾಟದ ಹಿಂದಿರುವ ಒಂದು ಶಕ್ತಿ, ದುಷ್ಟ ದೇವತೆ.

ಕೃತ್ಯಾ ಅಥರ್ವವೇದದ ಅಭಿಚಾರಿಕಾಣಿ(ಮಾಟದ ಮಂತ್ರಗಳು) ಎಂಬ ಅನೇಕ ಮಂತ್ರಗಳ ದೇವತೆ. ಋಗ್ವೇದದ ಕೊನೆಯ ಭಾಗದಲ್ಲಿ ಕೃತ್ಯಾ ಎಂಬ ಮಾತು ಬರುತ್ತದೆ.

ಇಷ್ಟಸಂಪಾದನೆಗಾಗಿ, ಅನಿಷ್ಟನಿವಾರಣೆಗಾಗಿ, ವೈರಿಗಳ ನಾಶನಕ್ಕಾಗಿ, ದ್ವೇಷಾಸೂಯೆಗಳ ಮುಯ್ಯಿ  ತೀರಿಸಿಕೊಳ್ಳುವುದಕ್ಕಾಗಿ ಕೃತ್ಯಾ ಪ್ರಯೋಗವನ್ನು ರಾಜರೂ ಆರ್ಯರೂ ಅನಾರ್ಯರೂ ಸ್ತ್ರೀ ಶೂದ್ರಾದಿಗಳೂ ಮಾಡುತ್ತಿದ್ದರು. ಮಾಟದ ಬೊಂಬೆಯನ್ನು ನಾನಾ ಆಕಾರಕ್ಕೆ ಹೊಂದಿಕೊಳ್ಳುವಂತೆ ಮಣ್ಣಿನಿಂದ ಕೈಯಲ್ಲೇ ಮಾಡಿ ಅದಕ್ಕೆ ವೇಷಭೂಷಣಾದಿಗಳನ್ನು ತೊಡಿಸುವ ವಾಡಿಕೆಯಿತ್ತು. ಈಗಲೂ ವಿಶೇಷವಾಗಿ ಹಳ್ಳಿಗಾಡಿನ ಇಂಥ ಮಣ್ಣಿನ ಹೆಣ್ಣು ಬೊಂಬೆಗಳನ್ನು ಮಾಡಿ ಕಣಿಗಲೆ ಹೂ ಮುಡಿಸಿ ಎಣ್ಣೆಯಲ್ಲಿ ಅದ್ದಿದ ಅರಿವೆಯ ಬತ್ತಿಗಳನ್ನು (ದಾಳ) ಉರಿಸುತ್ತ ಬೊಂಬೆಯ ಬಾಯಿಗೆ ತಾಮ್ರದ ಕಾಸನ್ನು ಕೊಟ್ಟು ಕಿವಿಮೂಗುಗಳಿಗೆ ರಂಜಕವಾಗುವಂತೆ ಅರಿಶಿನ ಕುಂಕುಮಾದಿಗಳನ್ನು ಮೆತ್ತಿ, ರೋಗಿಯನ್ನದರ ಮುಂದೆ ಕುಳ್ಳಿರಿಸಿ ಪೂಜೆ ಹಾಕಿಸಿ ಅನಂತರ ಬೊಂಬೆಯನ್ನು ಆತನೆದುರು ನೀವಾಳಿಸಿ ಅರಿವೆಯ ದಾಳಗಳು ಧಗಧಗನೆ ಉರಿಯುತ್ತಿರಲು ಬೊಂಬೆಯನ್ನು ಎತ್ತಿಕೊಂಡು ಹೋಗಿ ಕೂಡುದಾರಿಯ ಬಳಿಯೋ ರೋಗಿ ಹೆದರಿಕೊಂಡಿದ್ದರೆ ಅಂಥ ಜಾಗದಲ್ಲೋ ಇಡುವುದನ್ನು ಗಮನಿಸಬಹುದು. ಅಥರ್ವಕಾಲದಲ್ಲಿ ಈ ರೀತಿ ಮಾಡಿ, ಸಿಂಗರಿಸಿ ಅಭಿಚಾರದ(ಮಾಟ) ಮಂತ್ರಪ್ರಯೋಗಮಾಡಿ, ದರ್ಭೆ, ಹೊಲಗಳು, ಶ್ಮಶಾನ, ಗಾರ್ಹಪತ್ಯಾಗ್ನಿ-ಇವುಗಳಿರುವ ಕಡೆ ಬಚ್ಚಿಡುತ್ತಿದ್ದರು. ಬೇಯಿಸದಿರುವ ಹಸಿ ಮಡಕೆ, ಹಸಿಮಾಂಸ, ಮಿಶ್ರಧಾನ್ಯ-ಇವುಗಳಲ್ಲೂ ಕೃತ್ಯೆಯನ್ನು ಬಚ್ಚಿಟ್ಟು ಪ್ರಯೋಗಿಸುವುದು ರೂಢಿಯಲ್ಲಿತ್ತು.

ಇಂಥ ಮಾಟವನ್ನು ಕಂಡುಹಿಡಿಯುವವನಿಗೆ ವಲಗಿನ್ ಎಂದೂ ಅಗೆದು ತೆಗೆದು ಹಾಕುವವನಿಗೆ ಮೂಲಿನ್ ಎಂದೂ ಹೆಸರು.
ಹೀಗೆ ಕೃತ್ಯಾ ಮಾಡಿದಾಗ ಅದಕ್ಕೆ ಪ್ರತಿಮಾಟವನ್ನು (ಪ್ರತಿಕೃತ್ಯಾ) ಮಾಡುತ್ತಿದ್ದರು. ಅಪಾಮಾರ್ಗ ಎಂಬ ವನೌಷಧಿ ಕೃತ್ಯಾಪರಿಹಾರ ಮಾಡುತ್ತದೆಂಬ ನಂಬುಗೆಯಿತ್ತು. ಅದು ಮಾಟಗಾರನ ಮನೆಯನ್ನು ಹಾಳುಮಾಡಿಬಿಡುತ್ತಿತ್ತು. ಜಂಗಿಡವೆಂಬ ಮತ್ತೊಂದು ವನೌಷಧಿಗೆ ಮೂವತ್ತೈದು ಮಾಟಗಳನ್ನು, ಅಷ್ಟೇಕೆ, ನೂರು ಮಾಟಗಳನ್ನಾದರೂ ಹಿಂದೂಡುವ ಶಕ್ತಿಯಿತ್ತು. ಆದರೆ ನಿರಪರಾಧಿಯನ್ನು ಮಾಟ ಹಿಂಸಿಸುವಂತಿರಲಿಲ್ಲ. ಕೆಲವು ವೇಳೆ ಅದು ಕೃತ್ಯೆ ಮಾಡಿದವನ ಮೇಲೆಯೇ ಹಿಂತಿರುಗಿ ಎರಗಿ ಆತನನ್ನು ನಾಶಪಡಿಸುತ್ತಿತ್ತು. ಇಂಥ ಕೃತ್ಯಾಕೃತರಲ್ಲಿ ಪ್ರತೀಚೀನ ಆಂಗಿರಸನೆಂಬಾತ ಬಹು ಪ್ರಸಿದ್ಧ ಪುರೋಹಿತನಾಗಿದ್ದ.

ಮುಂದೆ ಮಹಾಭಾರತಾದಿಗಳಲ್ಲಿ ಕೃತ್ಯಾ ಪ್ರಯೋಗ ಮಾಡಿದ ಸಂದರ್ಭಗಳಿವೆ. ಚ್ಯವನ ಮಹರ್ಷಿ ಅಶ್ವಿನೀ ದೇವತೆಗಳ ಪ್ರಸಾದದಿಂದ ತಾರುಣ್ಯ ಪಡೆದು ಪ್ರತಿಫಲವಾಗಿ ತನ್ನ ಪತ್ನಿ ಸುಕನ್ಯೆಯ ತಂದೆ ಶರ್ಯಾತಿಯ ಯಜ್ಞದಲ್ಲಿ ಪುರೋಹಿತನಾಗಿ ಅವರಿಗೆ ಹವಿರ್ಭಾಗವನ್ನು ಕೊಡಿಸಿದನಷ್ಟೆ. ಭೂಲೋಕದಲ್ಲಿ ಸಂಚರಿಸುತ್ತಿದ್ದ ಅಶ್ವಿನೀ ದೇವತೆಗಳಿಗೆ ಹವಿರ್ಭಾಗದ ಹಕ್ಕಿಲ್ಲವೆಂದು ಕುಪಿತನಾದ ಇಂದ್ರ ತನ್ನ ವಜ್ರಾಯುಧ ಪ್ರಯೋಗ ಮಾಡಿ ಚ್ಯವನನನ್ನು ಕೊಲ್ಲಲೆತ್ನಿಸಲು ಆ ಮಹರ್ಷಿ ಕೃತ್ಯಾ ಸೃಷ್ಟಿಮಾಡಿ ಮಂತ್ರಬಲದಿಂದ ಇಂದ್ರನ ಬಾಹುಸ್ತಂಭನಮಾಡಿ ಅವನನ್ನೇ ಘಾತಿಸಲೆತ್ನಿಸಿದ.

ಭರದ್ವಾಜ ಮುನಿಯ ಮಗ ಯವಕ್ರೀತ ವಿಶ್ವಾಮಿತ್ರನ ಮೊಮ್ಮಗ ಪರಾವಸುವಿನ ಹೆಂಡತಿಯನ್ನು ಬಲಾತ್ಕಾರದಿಂದ ಮಾನಭಂಗಗೊಳಿಸಲು ವಿಶ್ವಾಮಿತ್ರನ ಮಗ ರೈಭ್ಯ ಕೃತ್ಯಾ ದೇವತೆಯನ್ನೂ ಒಬ್ಬ ರಾಕ್ಷಸನನ್ನೂ ಸೃಷ್ಟಿಸಿ ಪ್ರಯೋಗಿಸಲು ಕೃತ್ಯೆ ಯವಕ್ರೀತನ ಕಮಂಡಲವನ್ನು ಅಪಹರಿಸಿತಲ್ಲದೆ, ರಾಕ್ಷಸ ಯವಕ್ರೀತನನ್ನೇ ಕೊಂದುಹಾಕಿದ.

ಪುಂಡ್ರದೇಶದ ಅರಸು ವಾಸುದೇವ ಶ್ರೀಕೃಷ್ಣನನ್ನು ಕೊಲ್ಲಲು ಇಂಥ ಒಂದು ದುಷ್ಟದೇವತೆಯನ್ನು ಸೃಷ್ಟಿಮಾಡಿ ಆತನ ಮೇಲೆ ಪ್ರಯೋಗಿಸಲು ಶ್ರೀಕೃಷ್ಣ ಅದನ್ನು ಅವನ ಮೇಲೆಯೇ ಹಿಂತಿರುಗಿಸಿದ. ದುರ್ಯೋಧನ ಗಂಧರ್ವರಿಂದ ಬಂಧಿತನಾಗಿ ಕೊಂಡೊಯ್ಯಲ್ಪಡುತ್ತಿರುವಾಗ ಭೀಮಾರ್ಜುನರಿಂದ ರಕ್ಷಿತನಾದರೂ ಅವಮಾನದಿಂದ ಪ್ರಾಣತ್ಯಾಗ ಮಾಡಿಕೊಳ್ಳಬೇಕೆಂದಿರುವಾಗ ಕೃತ್ಯಾ ಆತನಿಗೆ ಸಹಾಯ ಮಾಡಿ ಪಾತಾಳಲೋಕಕ್ಕೆ ಒಯ್ಯಲು ದೈತ್ಯರು ಸಮಾಧಾನಮಾಡಿ ಅವನನ್ನು ಹಿಂತಿರುಗಿ ಕಳುಹಿಸಿದರು.  (ಸಿ.ಜೆ.ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ